
ಮಂಡ್ಯ ಜಿಲ್ಲೆಯ ನಾಗಮಂಗಲ ಸುದ್ದಿ:
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸಾವಿರಾರು ಶ್ರೇಷ್ಠ ಕವಿಗಳು ಬಂದು ಹೋಗಿದ್ದಾರೆ. ಆದರೆ ಕನ್ನಡ ಭಾಷೆ ಕಂಡ ಶ್ರೇಷ್ಟ ಪ್ರಕೃತಿ ಕುವೆಂಪು ಎಂದು ಸಾಹಿತಿ ನಾ.ಸು.ನಾಗೇಶ್ ಹೇಳಿದರು.
ನಾಗಮಂಗಲದ ತಾಲ್ಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕುವೆಂಪು ಕನ್ನಡ ಪ್ರೇಮ ಹಾಗೂ ವಿಶ್ವ ಮಾನವ ಸಂದೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕುವೆಂಪು ಕನ್ನಡಕ್ಕೆ ಪ್ರಥಮ ಜ್ಞಾನ ಪೀಠ ಪ್ರಶಸ್ತಿಯನ್ನು ತರುವ ಮೂಲಕ ಕನ್ನಡದ ಕೀರ್ತಿಯನ್ನು ದೇಶದಾದ್ಯಂತ ಹೆಚ್ಚಿಸಿದರು. ಪ್ರಕೃತಿ ಕವಿಯಾಗಿ, ರಸ ಋಷಿ,ಯುಗದ ಕವಿ,ಜಗದ ಕವಿಯಾಗಿ ಕನ್ನಡ ಸಾಹಿತ್ಯವನ್ನು ಆಕಾಶದೆತ್ತರಕ್ಕೆ ಕೊಂಡೊಯ್ದು ಶ್ರೇಷ್ಠ ಕವಿಯಾಗಿದ್ದಾರೆ.ಅವರ ಮೌಲ್ಯಗಳನ್ನು,ಜೀವನದ ಆದರ್ಶ ಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ಮಾಡಿದ ಪ್ರೊ.ಎಸ್. ಮಂಜು ಮಾತನಾಡಿ ಕುವೆಂಪು ಅವರು ಜೀವನದ ಪ್ರಾರಂಭದಲ್ಲಿ ಇಂಗ್ಲಿಷ್ ನಲ್ಲಿ ಕವನಗಳನ್ನು ರಚಿಸಿದರು.ನಂತರ ಸಾಹಿತಿಯೊಬ್ಬರ ಸಲಹೆಯಂತೆ ಮಾತೃಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡುವ ಅಭಿರುಚಿ ಬೆಳೆಸಿಕೊಂಡು ಕನ್ನಡ ಸಾಹಿತ್ಯ ದಲ್ಲಿಯೇ ಅದ್ವಿತೀಯ ಸಾಧನೆ ಮಾಡಿದ ಮಹಾನ್ ಕವಿಯಾದರು.ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರ ಗಳಲ್ಲಿಯೂ ಸಾಹಿತ್ಯವನ್ನು ರಚಿಸಿರುವ ಕುವೆಂಪು ವಿಶ್ವ ಮಾನವ ಸಂದೇಶವನ್ನು ನೀಡಿ ವಿಶ್ವ ಮಾನವ ಕವಿಯಾಗುವ ಜೊತೆಗೆ ಕನ್ನಡಿಗರ ವಿಶ್ವ ಮಾನವ ಗುಣವನ್ನು ಜಗತ್ತಿಗೆ ಸಾರಿದರು. ಸಮಾಜದ ಎಲ್ಲಾ ಜಾತಿ ಮತಗಳು ಒಂದೇ,ಎಲ್ಲಾ ದೇವರುಗಳು ಒಂದೇ ಆಗಿದ್ದು ನಮ್ಮಲ್ಲಿ ದ್ವೇಷ ಅಸೂಯೆ ಮನೋಭಾವನೆ ಇರಬಾರದು.ಯುವಜನತೆ ಹಿರಿಯರನ್ನು ಗೌರವಿಸಬೇಕು.ಅಲ್ಲದೇ ಒಳ್ಳೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು.ಆಗ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಉಪನ್ಯಾಸಕ ದಾನೇಗೌಡ,ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಬಸವೇಗೌಡ ಖರಡ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಶಾರದಮ್ಮ, ಪ್ರೊ.ಪರಮೇಶ್ ,ರವೀಶ್, ಅಧ್ಯಾಪಕರಾದ ರೇವಣ್ಣ, ಸಿದ್ದೇಶ್ವರ, ಶ್ರೀನಿವಾಸ,ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ವರದಿ:ಜಗದೀಶ ನಾಗಮಂಗಲ
Published by Royal TV
Royal tv Kannada news online website channel
View more posts